ಷಾಜಹಾನ್
	1529-1666. ಮೊಗಲರ ಪ್ರಸಿದ್ಧ ಐದನೆಯ ಸಾಮ್ರಾಟ.  ಇವನು 1529 ರಲ್ಲಿ ಜನಿಸಿದ. ಇವನ ತಂದೆ ಜಹಾಂಗೀರ್, ತಾತ ಅಕ್ಬರ್. ಇವನ ಮೊದಲ ಹೆಸರು ಖುರ್ರಮ್. 1627 ರಿಂದ 58 ರವರೆಗೆ ಮೊಗಲ್ ಸಾರ್ವಭೌಮನಾಗಿ ಆಡಳಿತ ನಡೆಸಿದ. ಇವನಿಗೆ ನೂರ್‍ಜಹಾನಳು ತನ್ನ ಸೋದರ ಅಸಫ್‍ಖಾನ್‍ನ ಮಗಳು ಅರ್ಜುಮನ್‍ಭಾನು ಅಥವಾ ಮಮ್ತಾಜ್ ಮಹಲಳೊಂದಿಗೆ 1612 ರಂದು ವಿವಾಹ ಮಾಡಿಸಿದಳಲ್ಲದೆ, ಇವನಿಗೆ ಚಕ್ರವರ್ತಿಯ ಸಿಂಹಾಸನದ ಬಲಭಾಗದಲ್ಲಿ ಕುಳಿತುಕೊಳ್ಳುವ ಗೌರವ ಹಾಗೂ ಷಾಜಹಾನ್ ಎಂಬ ಬಿರುದಿನೊಂದಿಗೆ 30,000 ಜಾಟರು ಮತ್ತು 20,000 ಸವಾರರ ಮುಖ್ಯಸ್ಥನನ್ನಾಗಿ ನೇಮಿಸಿದಳು. ಜಹಾಂಗೀರ್ 1627 ರಲ್ಲಿ ನಿಧನ ಹೊಂದಿ ದಾಗ ಇವನು ಇನ್ನೂ ದಖ್ಖನ್ನಿ ನಲ್ಲಿಯೇ ಇದ್ದ. ಅಷ್ಟರಲ್ಲಿ ಇಬ್ಬರು ಸೋದರರಾದ ಖುಸ್ರಾವ್ ಮತ್ತು ಪರಿರಜ್‍ರು ನಿಧನರಾಗಿದ್ದು ಉತ್ತರಾ ಧಿಕಾರಕ್ಕಾಗಿ ರಾಜಕುಮಾರ ಷಾರ್ಯಾ (ಷಹರಿ) ಮಾತ್ರ ಸ್ಪರ್ಧೆಯಲ್ಲುಳಿದ. ತನ್ನ ಅತ್ತೆ ನೂರ್‍ಜಹಾನಳ ಬೆಂಬಲದೊಂದಿಗೆ ಷಾರ್ಯಾ ಕೂಡಲೇ ತನ್ನನ್ನು ಸಾಮ್ರಾಟನೆಂದು ಘೋಷಿಸಿಕೊಂಡ. ಆದರೆ ಷಾಜಹಾನನ ಮಾವ ಮತ್ತು ಮಮ್ತಾಜ್ ಮಹಲಳ ತಂದೆ ಅಸಫ್‍ಖಾನನು ಷಾಜಹಾನನನ್ನು ಸಿಂಹಾಸ ನಕ್ಕೆ ತರಲು ಸರ್ವ ಪ್ರಯತ್ನ ನಡೆಸಿ, ದಖ್ಖನ್ನಿನಲ್ಲಿದ್ದ ಇವನಿಗೆ ತ್ವರಿತವಾಗಿ ಆಗ್ರಾಕ್ಕೆ ಬರುವಂತೆ ಸಮಾಚಾರ ಕಳುಹಿಸಿ, ಜನರನ್ನು ಸಮಾಧಾನ ಪಡಿಸುತ್ತಾ, ನಿಧನ ಹೊಂದಿದ್ದ ಖುಸ್ರುವಿನ ಮಗ ದಿವಾರ್ ಭಕ್ಷನನ್ನು ಮಧ್ಯವರ್ತಿ ಸಾಮ್ರಾಟನನ್ನಾಗಿ ನೇಮಿಸಿದ. ಮೀರ್‍ಭಕ್ತಿ ಇರಾಸತ್‍ಖಾನ ನನ್ನು ಒಲಿಸಿಕೊಂಡು, ಲಾಹೋರಿನ ವಿರುದ್ಧ ದಂಡೆತ್ತಿ ಹೋಗಿ ಷಾರ್ಯಾನನ್ನು ಸೋಲಿಸಿ ಅವನನ್ನು ಬಂಧಿಯನ್ನಾಗಿ ಮಾಡಿದ. ಅನಂತರ ದಖ್ಖನ್ನಿನಿಂದ ಹಿಂದಿರುಗಿದ ಷಾಜಹಾನನನ್ನು 1628 ಫೆಬ್ರವರಿಯಲ್ಲಿ ಚಕ್ರವರ್ತಿಯೆಂದು ಘೋಷಿಸಿದ. ಅಲ್ಲಿಯವರೆಗೆ ಚಕ್ರವರ್ತಿ ಯಾಗಿದ್ದ ಬಲಿಪಶು ದಿವಾರ್ ಭಕ್ಷನನ್ನು ಸಿಂಹಾಸನದಿಂದ ಕೆಳಗಿಳಿಸಿ ಸೆರಮನೆಗೆ ತಳ್ಳಲಾಯಿತು.

	ಇವನು ತನ್ನ ಆಳ್ವಿಕೆಯನ್ನು ಯಶಸ್ಸಿನಿಂದಲೇ ಆರಂಭಿಸಿದನಲ್ಲದೆ, ಅಸಫ್‍ಖಾನ್ ಮತ್ತು ಮಹಬತ್‍ಖಾನರ ಅದ್ವಿತೀಯ ಸೇವೆಗೆ ಮನ್ನಣೆ ನೀಡಿ ಅವರಿಗೆ ಉನ್ನತಾಧಿಕಾರಗಳನ್ನು ನೀಡಿದ. ಬಂದೇಲ್‍ಖಂಡದ ಜುಜ್ಜಾರ್‍ಸಿಂಗ್ ಮತ್ತು ದಖ್ಖನ್ನಿನ ರಾಜ್ಯಪಾಲ ಖಾನ್ ಜಹಾನ್ ಲೂದಿಯ ದಂಗೆಗಳನ್ನು ಯಶಸ್ವಿಯಾಗಿ ಅಡಗಿಸಿದ. ಬಂಗಾಳದಲ್ಲಿ ವ್ಯಾಪಾರ ಕೋಠಿಗಳನ್ನು ಸ್ಥಾಪಿಸಿಕೊಂಡು ಪ್ರಬಲರಾಗಿ ಆಕ್ಷೇಪಾರ್ಹ ಚಟುವಟಿಕೆಗಳಲ್ಲಿ ತೊಡಗಿದ್ದ ಪೋರ್ಚುಗೀಸರ ವಿರುದ್ಧ ಹೋರಾಡಿ ಅವರನ್ನು ತೀವ್ರವಾಗಿ ದಂಡಿಸಿದ.  ಇವನು ಅಧಿಕಾರಕ್ಕೆ ಬಂದ ಅನಂತರ ಕಾಸಿಂ ಖಾನನನ್ನು ಬಂಗಾಳದ ರಾಜ್ಯಪಾಲನನ್ನಾಗಿ ನೇಮಿಸಿ, ಅವನಿಗೆ ಪೋರ್ಚುಗೀಸರನ್ನು ದಂಡಿಸುವಂತೆ ಆಜ್ಞಾಪಿಸಿದ. ಅದರಂತೆ ಅವನು 1632 ರಲ್ಲಿ ಹೂಗ್ಲಿ ಕೋಟೆಗೆ ಮುತ್ತಿಗೆ ಹಾಕಿ ಮೂರು ತಿಂಗಳ ಹೋರಾಟದ ಅನಂತರ ಅದನ್ನು ವಶಪಡಿಸಿ ಕೊಂಡ.

	ಇವನ ಆಳ್ವಿಕೆಯ 4 ಮತ್ತು 5ನೆಯ ವರ್ಷಗಳಲ್ಲಿ ದಖ್ಖನ್ ಮತ್ತು ಗುಜರಾತ್‍ಗಳು ಅತ್ಯಂತ ಭೀಕರ ಬರಗಾಲಗಳಿಗೆ ತುತ್ತಾದವು. ಇವನು ತನ್ನ ಅಧಿಕಾರವನ್ನು ಬಲಪಡಿಸಿಕೊಂಡ ಅನಂತರ ಆಕ್ರಮಣಕಾರಿ ಮತ್ತು ವಿಸ್ತರಣಾ ನೀತಿ ಅನುಸರಿಸಿದ. ತನ್ನ ತಂದೆ ಕಾಲದಲ್ಲಿ ಕೈಬಿಟ್ಟು ಹೋಗಿದ್ದ ಕಾಂದಹಾರದ ಕೋಟೆ ಹಾಗೂ ಮಧ್ಯ ಏಷ್ಯದ ಬಲ್ಕ್ ಮತ್ತು ಬದಕ್ಷಾನ್ ಪ್ರದೇಶಗಳನ್ನು ವಶಪಡಿಸಿಕೊಳ್ಳಲು ಪರ್ಷಿಯನ್ ಹಾಗೂ ಇತರರ ವಿರುದ್ಧ ಹೋರಾಡಿ ಅಪಾರ ಹಣ ಹಾಗೂ ಸೈನ್ಯವನ್ನು ಕಳೆದುಕೊಳ್ಳಬೇಕಾಯಿತು. ಇದರಿಂದ ಮೊಗಲ್ ಸಾಮ್ರಾಜ್ಯದ ಘನತೆ ಗೌರವಗಳಿಗೆ ಧಕ್ಕೆಯುಂಟಾಯಿತು.

	ದಖ್ಖನ್ನಿನ ಬಗೆ ವಂಶಪರಂಪರಾನುಗತವಾಗಿ ಬಂದಿದ್ದ ವಿಸ್ತರಣಾ ನೀತಿಯನ್ನೇ ಇವನೂ ಮುಂದುವರೆಸಿದ.  ಅಕ್ಬರನ ಕಾಲದಲ್ಲಿ ಖಾನ್ದೇಶ್ ಮತ್ತು ಬೀರಾರಿನ ಕೆಲವು ಭಾಗಗಳನ್ನು, ಜಹಾಂಗೀರ ಕಾಲದಲ್ಲಿ ಅಹಮದ್ ನಗರವನ್ನು ಆಕ್ರಮಿಸಬೇಕೆಂದು ನಡೆಸಿದ ಪ್ರಯತ್ನ ಮಂತ್ರಿ ಮಲ್ಲಿಕ್ ಅಂಬರ್‍ನಿಂದ ಮುರಿಯಲ್ಪಟ್ಟಿತು. ಇವನು ಅಧಿಕಾರಕ್ಕೆ ಬಂದ ಅನಂತರ ದಖ್ಖನ್ನಿನ ರಾಜ್ಯಗಳನ್ನು ಗೆಲ್ಲಲು ದೃಢವಾದ ಪ್ರಯತ್ನಗಳನ್ನು ಜರುಗಿಸಿ 1631ರಲ್ಲಿ ಲಂಚ ಮತ್ತು ಸಂಧಾನದ ಮೂಲಕ ದೌಲತಾಬಾದ್, 1633ರಲ್ಲಿ ಅಹಮದ್ ನಗರವನ್ನು ವಶಪಡಿಸಿಕೊಂಡು ಅದರ ಯುವರಾಜನನ್ನು ಗ್ವಾಲಿಯರ್‍ನಲ್ಲಿ ಬಂಧನದಲ್ಲಿಡಲಾಯಿತು. ಇದಾದ ಅನಂತರ ಇವನು ಸ್ವತಂತ್ರ ಮುಸ್ಲಿಮ್ ರಾಜ್ಯಗಳಾಗಿದ್ದ ಗೋಲ್ಕೊಂಡ ಮತ್ತು ಬಿಜಾಪುರಗ ಳನ್ನು ವಶಪಡಿಸಿಕೊಳ್ಳಲು ಸ್ವತ: ತಾನೇ ದಖ್ಖನ್ನಿಗೆ ಪ್ರಯಾಣ ಬೆಳೆಸಿ ಸುಲ್ತಾನರಿಗೆ ತನ್ನ ಸಾರ್ವಭೌಮತ್ವ ಒಪ್ಪಿಕೊಳ್ಳುವಂತೆ ಹಾಗೂ ಕಪ್ಪ ಕಾಣಿಕೆ ಕಳುಹಿಸುವಂತೆ ಆಜ್ಞಾಪಿಸಿದ.

	ಇದರಿಂದ ಭಯಭೀತನಾದ ಗೋಲ್ಕಂಡದ ಸುಲ್ತಾನ ಮೊಗಲ್ ಸಾರ್ವಭೌಮತ್ವ ಒಪ್ಪಿಕೊಂಡರೆ, ಬಿಜಾಪುರದ ಸುಲ್ತಾನ ಆಜ್ಞಾಪನೆಗೆ ಮಣಿಯದೆ ತನ್ನ ಸ್ವಾತಂತ್ರವನ್ನು ರಕ್ಷಿಸಿಕೊಳ್ಳಲು ಪ್ರಯತ್ನ ಪಟ್ಟ.  1636ರಲ್ಲಿ ಮೊಗಲ್ ಸೈನ್ಯ ಬಿಜಾಪುರಕ್ಕೆ ಮುತ್ತಿಗೆ ಹಾಕಿ ಸುಲ್ತಾನನನ್ನು ಸೋಲಿಸಿ ಬಲವಂತವಾಗಿ ಅವನಿಂದ ಶಾಂತಿ ಒಪ್ಪಂದ ಮಾಡಿಕೊಂಡ. ಹೀಗೆ ಇವನು ದಖ್ಖನ್ನಿನ ಸಮಸ್ಯೆ ಬಗೆಹರಿಸಿದನಲ್ಲದೆ 18 ವರ್ಷದ ಯುವಕನಾ ಗಿದ್ದ ತನ್ನ 3ನೆಯ ಮಗ ಔರಂಗಜೇಬನನ್ನು ದಖ್ಖನ್ನಿನ ರಾಜ್ಯಪಾಲನಾಗಿ ನೇಮಿಸಿದ.

	ಮೊಗಲ್ ಇತಿಹಾಸದಲ್ಲಿ ಸಾಮಾನ್ಯವಾಗಿ ಇವನ ಕಾಲವನ್ನು ಸುವರ್ಣ ಯುಗವೆಂದು ಕರೆಯಲಾಗಿದೆ. ಇವನ ಕಾಲದಲ್ಲಿ ಸಾಮ್ರಾಜ್ಯ ವಿಸ್ತಾರದ ಪರಾಕಾಷ್ಠತೆ ಮುಟ್ಟಿತು. ಸಿಂಹಾಸನಕ್ಕಾಗಿ ಇವನ ಮಕ್ಕಳಲ್ಲಿ ಅಂತರ್ಯುದ್ಧ ಪ್ರಾರಂಭವಾಗುವವರೆಗೆ ಸಾಮ್ರಾಟನ ಅಧಿಕಾರಕ್ಕೆ ಯಾವ ಪರಕೀಯ ದಾಳಿಯ ಭೀತಿ ಇರಲಿಲ್ಲ. ಇವನ ಕಾಲದಲ್ಲಿ ಪಾಶ್ಚಿಮಾತ್ಯ ರಾಜ್ಯಗಳೊಂದಿಗೆ ಭಾರತದ ವ್ಯಾಪಾರ ಮತ್ತು ವಾಣಿಜ್ಯಗಳು ಅಭಿವೃದ್ಧಿ ಹೊಂದಿದವು.  ಸಾಮ್ರಾಜ್ಯದ ಆರ್ಥಿಕ ಸ್ಥಿತಿಗತಿ ಚೆನ್ನಾಗಿದ್ದವು. ಆಳ್ವಿಕೆ ಆಡಂಬರ ಹಾಗೂ ವೈಭವಗಳಿಂದ ಕೂಡಿತು. ಆ ಕಾಲದಲ್ಲಿ ನಿರ್ಮಾಣವಾದ ಅದ್ಭುತ ಮತ್ತು ಭವ್ಯ ವಾಸ್ತುಶಿಲ್ಪಗಳಾದ ತಾಜ್‍ಮಹಲ್, ಪರ್ಲ್ ಮಸೀದಿ, ದಿವಾನಿ-ಏ-ಖಾಸ್, ದಿವಾನಿ-ಏ-ಅಮ್, ಮೋತಿಮಸೀದಿ, ಜಾಮೀ ಮಸೀದಿ ಮತ್ತು ಪ್ರಪಂಚವಿಖ್ಯಾತ ಮಯೂರ ಸಿಂಹಾಸನ ಹಾಗೂ ಹಲವಾರು ಕಟ್ಟಡಗಳು, ಅರಮನೆಗಳು, ಕೋಟೆಗಳು, ಉದ್ಯಾನವನಗಳು, ಮಸೀದಿಗಳು ಆಗ್ರಾ, ದೆಹಲಿ, ಲಾಹೋರ್, ಕಾಬೂಲ್, ಕಾಶ್ಮೀರ, ಕಾಂದಹಾರ್, ಅಜ್ಮೀರ್, ಅಹಮದಾಬಾದ್ ಮುಂತಾದೆಡೆ ನಿರ್ಮಾಣವಾದವು. ಇವನು ಇವುಗಳ ನಿರ್ಮಾಣಕ್ಕೆ ಅಪಾರ ಹಣ ವೆಚ್ಚ ಮಾಡಿದ. ಇವನ ಕಾಲದಲ್ಲಿ ಭಾರತಕ್ಕೆ ಭೇಟಿ ನೀಡಿದ ವಿದೇಶೀ ಪ್ರವಾಸಿಗರು ಹಾಗೂ ವರ್ತಕರು ಇವನ ಆಸ್ಥಾನದ ಆಡಂಬರ ಮತ್ತು ವೈಭವ, ವಿಲಾಸಗಳನ್ನು ನೋಡಿ ವಿಸ್ಮಿತರಾಗಿದ್ದರು. ಇವೆಲ್ಲವೂ ಸಾಮಾನ್ಯವಾಗಿ ಪ್ರತಿಯೊಬ್ಬರಲ್ಲಿಯೂ ಶಾಂತಿ ಮತ್ತು ಸಮೃದ್ಧಿಗಳು ಇವನ ಕಾಲದಲ್ಲಿ ನೆಲೆಸಿದ್ದವೆಂಬ ನಂಬಿಕೆ ಹುಟ್ಟಿಸುತ್ತವೆ. ಆದರೆ ನೈಜ ಸ್ಥಿತಿ ತದ್ವಿರುದ್ಧವಾಗಿತ್ತು, ಹೊರನೋಟದ ಆಕರ್ಷಣೆ ಮತ್ತು ವೈಭವದ ಮುಸುಕು ತೆಗೆದು ಒಳಹೊಕ್ಕು ನೋಡಿದಲ್ಲಿ ಆಗಿನ ಕಾಲದ ಆಡಳಿತ, ಆರ್ಥಿಕ ಪದ್ಧತಿ ಹಾಗೂ ಜನ ಜೀವನದ ಸ್ಥಿತಿಗತಿಗಳು ಅನೇಕ ತೀವ್ರತರ ಸಮಸ್ಯೆಗಳಿಗೆ ಈಡಾಗಿದ್ದವೆಂಬುದು ತಿಳಿಯುತ್ತದೆ.  ಇವನ ಕೊನೆಯ ದಿನಗಳು ದುರಂತಮಯವಾಗಿದ್ದವು. ಸಿಂಹಾಸನದ ಉತ್ತರಾಧಿಕಾರಕ್ಕಾಗಿ ಇವನ ಮಕ್ಕಳಲ್ಲಿ ಅಂತರ್ಯುದ್ಧ 1657 ಸೆಪ್ಟೆಂಬರ್‍ನಲ್ಲಿ ಆರಂಭವಾಗಿ ಇವನು ನಿಧನ ಹೊಂದುವವರೆಗೂ ನಡೆಯಿತು. ಇವನು ಆಗ್ರಾದ ಕೋಟೆಯಲ್ಲಿ ಸಾಮಾನ್ಯ ಬಂದಿಯಾಗಿ ಕಷ್ಟ, ನಿಷ್ಠುರಗಳಿಗೆ ಗುರಿಯಾಗಿ ಎಂಟು ವರ್ಷಗಳ ಬಂಧನದ ಅನಂತರ 1666 ಜನವರಿ 22 ರಂದು ನಿಧನ ಹೊಂದಿದ. ಅನಂತರ ಔರಂಗಜೇಬ ಮೊಗಲ್ ಸಾಮ್ರಾಟನಾಗಿ ಅಧಿಕಾರಕ್ಕೆ ಬಂದ.		
					*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ